ಇನ್ನೂ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಮೈಸೂರು, ಮಂಡ್ಯ, ಕೊಪ್ಪಳ, ಬೀದರ್, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಮಂಗಿಹಾಳ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಕುರಿಗಾಹಿ ಸಾವನ್ನಪ್ಪಿದ್ದಾನೆ. ಹೋನಗೇರಾ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಚಾಮರಾಜನಗರದ ಹನೂರು ತಾಲೂಕಿನ ಮಂಚಾಪುರ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ 3 ಹಸುಗಳು ಸಾವಿಗೀಡಾಗಿವೆ. ಬಿಳಿಗಿರಿರಂಗನ ಬೆಟ್ಟದ ತುಂಬಾ ಮೋಡಗಳು ಆವರಿಸಿದ ನಯನ ಮನೋಹರ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಪರಿಣಾಮ ಮುಂಗಾರು ಬಿರುಸುಗೊಂಡಿದೆ. ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 3-4 ದಿನ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮೇ 21ರವರೆಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
#PublicTV #Karnataka #Rain